ಕುರ್ನಾನ್, ಆಂಡ್ರೇ ಫ್ರೆಡರಿಕ್
	1895-ಅಮೆರಿಕ ವೈದ್ಯ. ಜನನ 1895ರ ಸೆಪ್ಟೆಂಬರ್ 24ರಂದು ಪ್ಯಾರಿಸಿನಲ್ಲಿ . ವಿದ್ಯಾಭ್ಯಾಸವನ್ನು ಅಲ್ಲಿನ ವಿಶ್ವವಿದ್ಯಾಲಯದಲ್ಲೇ ಮುಗಿಸಿ ವೈದ್ಯಪದವಿಯನ್ನು ಪಡೆದ (1930). ಹೃದಯರೋಗಗಳನ್ನು ಕುರಿತು ಇವನಿಗೆ ಅಧಿಕ ಕುತೂಹಲ. ಅಮೆರಿಕ ಸಂಯುಕ್ತಸಂಸ್ಥಾನಗಳ ಸುಪ್ರಸಿದ್ಧ ವೈದ್ಯ ಡಿಕಿನ್ಸನ್ ಡಬ್ಲ್ಯು, ರಿಚಡ್ರ್ಸ್ ಎಂಬಾತನೊಡನೆ 35 ವರ್ಷಗಳಿಗೂ ಮಿಕ್ಕಿ ಹೃದಯರೋಗಗಳನ್ನು ಕುರಿತು ಅಧ್ಯಯನ ಮತ್ತು ವ್ಯವಸಾಯ ನಡೆಸಿದ. ಹೃದಯ ಮತ್ತು ಶ್ವಾಸಕೋಶಗಳು ಹೇಗೆ ಕೆಲಸಮಾಡುತ್ತವೆ. ಎಂಬುದನ್ನು ಕರಾರುವಾಕ್ಕಾಗಿ ಕಂಡುಹಿಡಿದುಕೊಳ್ಳುಲು ಹೊಸಮಾರ್ಗಗಳನ್ನು ಕಲ್ಪಿಸಿಕೊಳ್ಳವ ಅವಶ್ಯಕತೆ ಅಗ ಬಹಳವಾಗಿತ್ತು. ಆ ಹೊತ್ತಿಗಾಗಲೇ ವರ್ನರ್ ಫ್ರಸ್‍ಮನ್ ಎಂಬಾತ ಸ್ವಂತ ದೇಹದ ಮೇಲೆ ಒಂದು ಯಶಸ್ವೀ ಪ್ರಯೋಗ ನೆಡೆಸಿದ್ದ (1929); ರಬ್ಬರ್ ಕೊಳವೆಯೊಂದನ್ನು ತನ್ನ ತೋಳಿನ ಅಭಿಧಮನಿಯ ಮೂಲಕ ಹೃದಯದ ಬಲಹೃತ್ಕರ್ಣಕ್ಕೆ ಸಾಗಿಸಿ ಅಲ್ಲಿನ ರಕ್ತದ ಒತ್ತಡ ಮತ್ತು ಸಂಚಾರವನ್ನು ಕಂಡುಹಿಡಿಯುವುದೇ ಈ ಪ್ರಯೋಗ. ಇದನ್ನು ಕುರ್ನಾನ್ ಇನ್ನೂ ಉತ್ತಮ ಪಡಿಸಿ ಹೃದಯಕ್ಕೆ ಕೊಳವೆಯನ್ನು ಸಾಗಿಸುವ ವಿಧಾನವನ್ನು (ಕಾರ್ಡಿಯರ್ ಕಥೀಟರೈಸೇಷನ್) ಪರಿಷ್ಕರಿಸಿ ಹೃದಯ ರೋಗ ಬಂದಾಗ ಹೃದಯ ಯಾವರೀತಿಯಲ್ಲಿ ಕೆಟ್ಟಿದೆ ಎಂಬುದನ್ನು ಕಂಡುಹಿಡಿಯಲು ಉಪಯೋಗವಾಗುವಂತೆ ಮಾಡಿದ. ಈ ರೀತಿ ಕೊಳವೆಯನ್ನು ಹೃದಯದೊಳಕ್ಕೆ ಸಾಗಿಸುವ ವಿಧಾನಕ್ಕೆ ಕುರ್ನಾನನ ಪ್ರಯೋಗಕ್ರಮವೆಂದು ಈಗಲೂ ಬಹಳ ಪ್ರಸಿದ್ಧವಾಗಿದೆ. ಹೃದಯಕ್ಕೆ ಸಂಬಂಧಿಸಿದ ಹೊಸ ಅಧ್ಯಾಯದ ಪ್ರವರ್ತನಕಾರರಲ್ಲಿ ಕುರ್ನಾನ್ ಒಬ್ಬ. 

	ವೈದ್ಯ ಮತ್ತು ದೇಹಶಾಸ್ತ್ರ ವಿಭಾಗಗಳಿಗೆ ಮೀಸಲಾಗಿಟ್ಟಿದ್ದ ನೊಬೆಲ್ ಬಹುಮಾನವನ್ನು ರಿಚಡ್ರ್ಸ್ ಮತ್ತು ಫ್ರಾಸ್‍ಮನ್‍ರೊಡನೆ ಕುರ್ನಾನ್ 1956ರಲ್ಲಿ ಪಡೆದ. 1934ರಲ್ಲಿ ಇವನು ಕೊಲಂಬಿಯಾ ವಿಶ್ವವಿದ್ಯಾಲಯದ ವೈದ್ಯರುಗಳ ಸಭೆಗೆ ಸದಸ್ಯನಾಗಿ ಸೇರಿಸಲ್ಪಟ್ಟ. 1941ರಲ್ಲಿ ಸಂಯುಕ್ತ ಸಂಸ್ಥಾನದ ರಾಷ್ಟ್ರತ್ವವನ್ನು ಪಡೆದು ಅಲ್ಲಿಯೇ ಶಾಶ್ವತವಾಗಿ ನೆಲೆಸಿದ್ದ.	

	(ಎಚ್.ಆರ್.ಡಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ